
ನನ್ನ ನೆರಳು - ಜೊತೆಗಿನ ಬದುಕು
ಬದುಕಿನ ಆರಂಭದಿಂದ ಅಂತ್ಯದವರೆಗೆ
ಪ್ರತಿ ದಿನ ಪ್ರತಿ ಕ್ಷಣ ನೀನಿರುವೆ ಜೊತೆಗೆ
ಈ ಭೂಮಿಯಲಿ ನನಗಾರು ಇಲ್ಲ ಎನಿಸಿದರೆ
ನನ್ನ ಎದುರಲೇ ನಿಂತು ನಾನಿರುವೆ ಎನುವೆ
ಹಗಲಿನಲ್ಲಿ ನನ್ನ ಬೆಂಬಿಡದೆ ಬರುವೆ
ಇರುಳಿನಲ್ಲಿ ನನ್ನೊಳು ಬೆರೆತು ಬಿಡುವೆ
ಯಾವ ಜನ್ಮದ ನಂಟೋ ಗೊತ್ತಿಲ್ಲ ತಿಳಿದಿಲ್ಲ
ನನ್ನ ಜೊತೆಗೆ ನೀ ಬೆಳದು ಬಂದಿರುವೆ
ನನ್ನೊಳಗೆ ನೀ ಬೆರೆತು ಹೋಗಿರುವೆ
ಬದುಕಿನಲು ಜೊತೆಯಾಗಿ ಇರುವೆ
ಅಂತ್ಯದಲು ಜೊತೆಯಾಗಿ ಬರುವೆ
ನನ್ನ ನೋವು ನಲಿವುಗಳೆಲ್ಲವನು ನೀ ಬಲ್ಲೆ
ಅ ಸಮಯದಲಿ ನೀನಿದ್ದೆ ನನ್ನ ಜೊತೆಯಲ್ಲೇ
ನಿನಗೆ ತಿಳಿಯದಾವುದು ನನ್ನ ಬದುಕಲಿ ಇಲ್ಲ
ನನಗೆ ತಿಳಿಯದುದು ಕೂಡ ನಿನಗೆ ತಿಳಿದಿದೆಯಲ್ಲ
ಸಂತಸವ ಸವಿದಿರುವೆ ಸಂಕಟವ ಸಹಿಸಿರುವೆ
ಸಂಗಾತಿ ದೂರಾದರು ನೀ ಹತ್ತಿರದಲೇ ನಿಂತೇ
ಸಂತೈಸುವರಿಲ್ಲದಿದ್ದಾಗಲು ಜೊತೆಯಲ್ಲೇ ಕುಳಿತೆ
ನಾ ನಿಂತಲ್ಲಿ ನಿಂತೆ ಕುಳಿತಲ್ಲೇ ನೀನು ಕುಳಿತೆ
ಸಾವಿನಲು ಜೊತೆಗೂಡಿ ಚಲನೆಯನೆ ಮರೆತೆ